Endultra Technologyt Advertisement
Corruption

ಮಂಗಳೂರಿನಲ್ಲಿ ಮಲ್ಟಿ ಸ್ಪೇಚಲ್ ಕಾರ್ ಪಾರ್ಕಿಂಗ್

ಮಂಗಳೂರಿನಲ್ಲಿ ಮಲ್ಟಿ ಸ್ಪೇಚಲ್ ಕಾರ್ ಪಾರ್ಕಿಂಗ್

ಮಂಗಳೂರು, ಆ.28: ನಗರದ ಜನನಿಬಿಡ ಪ್ರದೇಶಗಳಲ್ಲಿನ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಬಹು ಸಮಯದ ಬೇಡಿಕೆಗಳಲ್ಲಿ ಒಂದಾಗಿರುವ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಸ್ಮಾರ್ಟ್ ಸಿಟಿ ಯೋಜನೆಯಡಿ ಶೀಘ್ರವೇ ತಲೆ ಎತ್ತಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಇಂದು ಆಯೋಜಿಸಲಾದ ಸಂಚಾರ ಸಮಸ್ಯೆಗಳ ಪರಿಹಾರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್‌ಗೆ ಒಂದು ತಿಂಗಳಲ್ಲಿ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಗೊಳಿಸಿ ಸೆಪ್ಟಂಬರ್ ಅಂತ್ಯದೊಳಗೆ ಕಾಮಗಾರಿ ಆರಂಭಿಸುವ ನಿರೀಕ್ಷೆ ಇದೆ. ಈ ಹಿಂದೆ ಈ ಯೋಜನೆಯನ್ನು ಮೂಡಾಕ್ಕೆ ನೀಡಲಾಗಿತ್ತು. ಆದರೆ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮೂಡಾದಿಂದ ಹಿಂಪಡೆಯಲಾಗಿತ್ತು. ಹಳೆ ಸರ್ವಿ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ನೂತನ ಯೋಜನೆ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

*ಮೊಬೈಲ್ ಕ್ಯಾಂಟೀನ್ ಬಗ್ಗೆ ಕ್ರಮಕ್ಕೆ ಸೂಚನೆ

ಬಿಜೈಯ ಮೆಸ್ಕಾಂ ಕಚೇರಿ ಎದುರಿನ ಫಾಸ್ಟ್ ಫುಡ್ ಅಂಗಡಿಯಾತ ರಸ್ತೆ ಕಬಳಿಸಿದ್ದಾನೆ ಎಂದು ಉಪ ಮೇಯರ್ ರಜನೀಶ್ ಹೇಳಿದಾಗ, ನಾವು ಈಗಾಗಲೇ ಅಲ್ಲಿ ದಾಳಿ ಮಾಡಿದ್ದೆವು. ಆತ ನಮ್ಮ ಮೇಲೆಯೇ ಕೇಸು ಹಾಕಿದ್ದಾನೆ. ಅಲ್ಲಿ ವಾಹನ ನಿಲ್ಲಿಸುವವರ ಮೇಲೆ ದಬ್ಬಾಳಿಕೆ ಮಾಡಿದ್ದಾನೆ. ಆದ್ದರಿಂದ ಅಲ್ಲಿರುವ ಟೆಂಪೊವನ್ನು ಮೋಟರ್ ವೆಹಿಕಲ್ ಕಾಯಿದೆ ಪ್ರಕಾರ ಜಫ್ತಿ ಮಾಡಿ, ಆತನ ಮೇಲೆ ಅನಿಧಿಕೃತ ವ್ಯಾಪಾರ ಮಾಡುವ ಕೇಸು ದಾಖಲಿಸಿ ಎಂದು ಡಿಸಿಪಿ ಮತ್ತು ಆರ್‌ಟಿಒಗೆ ಮೇಯರ್ ಸೂಚನೆ ನೀಡಿದರು.

ಮಂಗಳೂರಿನ ಸಂಚಾರ ಸಮಸ್ಯೆಗೆ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳೂ ಕಾರಣ ಎಂದು ಕಾರ್ಪೊರೇಟರ್ ಅಬ್ದುಲ್ ರವೂಫ್ ಸಹಿತ ಇತರ ಹಲವು ಸದಸ್ಯರು ಆಕ್ಷೇಪಿಸಿದರು. ಕೆಲವು ಬಸ್‌ಗಳಿಗೆ ಪಂಪ್‌ವೆಲ್, ಮಲ್ಲಿಕಟ್ಟೆ, ಕಂಕನಾಡಿಗಿಂತ ಒಳಗೆ ಬರಲು ಅನುಮತಿ ಇಲ್ಲದಿದ್ದರೂ, 130 ಸಂಚಾರ ನಡೆಸುತ್ತಿವೆ ಎಂದು ಕೆಎಸ್ಸಾರ್ಟಿಸಿ ಡಿಸಿ ದೀಪಕ್ ಕುಮಾರ್ ಕೆ. ಮತ್ತು ಡಿಟಿಒ ಜೈಶಾಂತ್ ಗಮನ ಸೆಳೆದರು.

ಆರ್‌ಟಿಒ ಕಚೇರಿ ಮುಂದಿನಿಂದಲೇ ಇಷ್ಟು ಸಂಖ್ಯೆಯ ಬಸ್ಸುಗಳು ಅನಧಿಕೃತವಾಗಿ ಓಡಾಡುತ್ತಿದ್ದರೂ, ಅಧಿಕಾರಿಗಳು, ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಅಸಮಾಧಾನಿಸಿದ ಮೇಯರ್, ಅಂತಹ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಎಂದು ಸೂಚಿಸಿದರು.

ಡಿಸಿಪಿ ಹನುಮಂತರಾಯ ಮಾತನಾಡಿ, ಪೊಲೀಸರು ಕೇಸು ಮಾತ್ರ ಹಾಕಬಹುದು. ಸಂಚಾರ ಸ್ಥಗಿತ ಮಾಡಿಸಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಅಂಕಿ ಅಂಶ ತೆಗೆದು, ನಂತರ ಆರ್‌ಟಿಒ, ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಬಸ್‌ಗಳ ಪರ್ಮಿಟ್ ರದ್ದುಗೊಳಿಸಿದರೆ ಮಾತ್ರ ಪರಿಣಾಮಕಾರಿ ಕ್ರಮ ನಿರೀಕ್ಷಿಸಬಹುದು ಎಂದಾಗ, ಸಭೆಯಲ್ಲಿ ಸಮ್ಮತಿ ಸೂಚಿಸಲಾಯಿತು.

ಕದ್ರಿ ಕಂಬಳ ಜಂಕ್ಷನ್‌ನಲ್ಲಿ ಅಪಘಾತಗಳು ನಡೆಯುವ ಬಗ್ಗೆ, ಕದ್ರಿ ದ್ವಾರ ಬಳಿ ಅನಧಿಕೃತ ರಿಕ್ಷಾ ಪಾರ್ಕಿಂಗ್ ಬಗ್ಗೆ ಅಶೋಕ್ ಕುಮಾರ್ ಡಿ.ಕೆ., ಮಲ್ಲಿಕಟ್ಟೆ ಆಭರಣ ಜುವೆಲ್ಲರಿ ಬಳಿ ಹಂಪ್ಸ್ ಹಾಕುವ ಬಗ್ಗೆ ಮತ್ತು ಶಿವಭಾಗ್‌ನಿಂದ ಮಲ್ಲಿಕಟ್ಟೆ ಮೂಲಕ ಸಂಚರಿಸುವ ಬಸ್‌ಗಳು ಆ್ಯಗ್ನೆಸ್ ಮೂಲಕ ಸಂಚರಿಸಿ ನಿಯಮ ಉಲ್ಲಂಘನೆ ಮಾಡುವ ಬಗ್ಗೆ ಸಬಿತಾ ಮಿಸ್ಕಿತ್ ಗಮನಸೆಳೆದಾಗ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸಿಪಿ ತಿಲಕ್‌ಚಂದ್ರ ಹೇಳಿದರು.

ಕಂಕನಾಡಿ- ಪಂಪ್‌ವೆಲ್ ಬೈಪಾಸ್ ರಸ್ತೆ ದುರಸ್ತಿ ಮಾಡುವಂತೆ ಮತ್ತು ಹೆದ್ದಾರಿಯ ಇಂಡಿಯಾನಾ ಆಸ್ಪತ್ರೆ ಎದುರು ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವ ಬಗ್ಗೆ ಆಶಾ ಡಿಸಿಲ್ವ, ಮಂಗಳಾದೇವಿಗೆ ತೆರಳುವ ಕೆಲವು ಬಸ್‌ಗಳು ರೂಟ್ ತಪ್ಪಿಸಿ ಸಂಚಾರ ಮಾಡುತ್ತವೆ ಮತ್ತು ಅತ್ತಾವರ ಕೆಎಂಸಿ ಬಳಿ ರಸ್ತೆಯಲ್ಲೇ ವಾಹನ ಪಾರ್ಕ್ ಮತ್ತು ನಂದಿಗುಡ್ಡ ಸ್ಮಶಾನ ಬಳಿ ಗ್ಯಾರೇಜಿನ ವಾಹನಗಳನ್ನು ರಸ್ತೆ ಬಳಿ ನಿಲ್ಲಿಸುವ ಬಗ್ಗೆ ಶೈಲಜಾ ಮಾಹಿತಿ ನೀಡಿದರು.

ಮಹಾಕಾಳಿಪಡ್ಪು ರೈಲ್ವೇ ಗೇಟ್ ಬಳಿ ವಾಹನಗಳು ಹೆಚ್ಚು ಹೊತ್ತು ನಿಲ್ಲಬೇಕಾಗುತ್ತವೆ. ಇಲ್ಲಿ ಮೀನಿನ ಲಾರಿಗಳು ನಿಂತು ನೀರು ಬಿಡುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುವ ಜತೆಗೆ, ರಸ್ತೆಯೂ ಹಾಳಾಗುತ್ತಿದೆ ಎಂದು ರತಿಕಲಾ ಗಮನ ಸೆಳೆದರು. ಮೀನಿನ ಲಾರಿಗಳ ಸಂಚಾರಕ್ಕೆ ಬೇರೆ ರಸ್ತೆ ಇಲ್ಲ. ಅದೊಂದೇ ಇರುವುದು. ಇಲ್ಲದಿದ್ದರೆ ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಬೇಕಾಗುತ್ತದೆ. ನಿರ್ದಿಷ್ಟ ವಾಹನಗಳ ಸಂಖ್ಯೆ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಸಿಪಿ ಹೇಳಿದರು.

ಬಂದರ್‌ನ ಅಝೀಝುದ್ದೀನ್ ಮತ್ತು ಜೆಎಂ ರಸ್ತೆ ಸಂಚಾರದ ಸಮಸ್ಯೆ ಬಗ್ಗೆ ರಮೀಝಾ ಬಾನು, ರಾಷ್ಟ್ರೀಯ ಹೆದ್ದಾರಿ ಕುಳಾಯಿಯಲ್ಲಿ ವಿಭಾಜಕದ ಕಳೆ ತೆಯದೆ ಮತ್ತು ವಿದ್ಯುತ್ ದೀಪ ಇಲ್ಲದೆ ಅಪಘಾತಗಳು ನಡೆಯುತ್ತಿರುವ ಬಗ್ಗೆ ಗಣೇಶ್ ಹೊಸಬೆಟ್ಟು, ಮಣ್ಣಗುಡ್ಡ ಗುರ್ಜಿ ವೃತ್ತ ಬಳಿ ಸರ್ಕಲ್ ನಿರ್ಮಿಸುವ ಮತ್ತು ಮಠದಕಣಿಯ ಅನಧಿಕೃತ ಪಾರ್ಕ್, ಬಸ್‌ಗಳ ರಸ್ತೆ ಬದಲಾವಣೆ ಬಗ್ಗೆ ಜಯಂತಿ ಆಚಾರ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಫಳ್ನೀರ್‌ನ ಆಸ್ಪತ್ರೆ ಎದುರು ಮತ್ತು ವಾಸ್‌ಲೇನ್‌ನಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಈ ಬಗ್ಗೆ ಬಹಳಷ್ಟು ದೂರು ಬರುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಮೇಯರ್ ಸೂಚಿಸಿದರು. ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group