Endultra Technologyt Advertisement
Karnataka

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ; ರಾಹುಲ್ ಗಾಂಧಿ ರಾಯಚೂರಿನಲ್ಲಿ

ರಾಯಚೂರು ಸಮಾವೇಶದಲ್ಲಿ ಮುಖ್ಯಮಂತ್ರಿಯವರು ಮಾಡಿದ ಭಾಷಣದ 

ರಾಯಚೂರು: ನಾವು ಅಧಿಕಾರಕ್ಕೆ ಬಂದರೆ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ರಾಹುಲ್ ಗಾಂಧಿಯವರು ಹೇಳಿದ್ದರು. ಅವರು ಮತ್ತು ಸೋನಿಯಾಗಾಂಧಿಯವರ ಪ್ರಯತ್ನದಿಂದ ಹಿಂದಿನ ಡಾ. ಮನಮೋಹನ್ ಸಿಂಗ್ ಅವರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ಒದಗಿಸಿತು.

ಇದರಿಂದ ಈ ಭಾಗದ ಜನರಿಗೆ ವಿಶೇಷ ಸೌಲಭ್ಯಗಳು ಸಿಗುವಂತೆ ಆಗಿದೆ. ಅನೇಕ ಮಂದಿ ಯುವಕ, ಯುವತಿಯರು ಶಿಕ್ಷಕರು, ವೈದ್ಯರು, ಎಂಜಿನಿಯರುಗಳಾಗಿದ್ದಾರೆ. ಸಾವಿರಾರು ಮಂದಿಗೆ ಸರ್ಕಾರಿ ಕೆಲಸ ಸಿಕ್ಕಿದೆ.

ನಮ್ಮ ಸರ್ಕಾರ ಈ ವರೆಗೆ ಎರಡೂವರೆ ಸಾವಿರ ಕೋಟಿ ರೂ.ಗಳನ್ನು ಈ ಭಾಗದ ಅಭಿವೃದ್ಧಿಗೆ ವೆಚ್ಚ ಮಾಡಿದೆ. ಈ ವರ್ಷ ಒಂದೂವರೆ ಸಾವಿರ ಕೋಟಿ ರೂ. ವಿನಿಯೋಗಿಸಲಾಗುತ್ತಿದೆ.

Congress Vice President Rahul Gandhi with Chief Minister Siddaramaiah in Raichur

ಬಿಜೆಪಿ ಅವಧಿಯಲ್ಲಿ ಯಡಿಯೂರಪ್ಪ, ಜಗದೀಶ ಶೆಟ್ಟರ್, ಸದಾನಂದಗೌಡರು ಮುಖ್ಯಮಂತ್ರಿಗಳಾಗಿದ್ದರು. ಆದರೆ, ಯಾರೂ ಬಿಡಿಗಾಸು ಕೊಡಲಿಲ್ಲ. ಈ ಭಾಗಕ್ಕೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ.

ಪ್ರತಿ ವರ್ಷ ಮೂರು ಸಾವಿರ ಕೋಟಿ ರೂ.ಗಳನ್ನು ಹೈದರಾಬಾದ್-ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಖರ್ಚು ಮಾಡುತ್ತೇವೆ ಎಂದು ಹೇಳಿದ್ದೇವೆ. ಅದರಂತೆ ನಡೆದುಕೊಳ್ಳುತ್ತಿದ್ದೇವೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇದ್ದಾಗ ಹಲವು ಬಾರಿ ಮನವಿ ಮಾಡಿದರೂ ವಿಶೇಷ ಸ್ಥಾನಮಾನ ಸಿಗಲಿಲ್ಲ.

ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪತ್ರ ಬರೆದಾಗ ಸಾಧ್ಯವೇ ಇಲ್ಲ ಎಂಬ ಉತ್ತರವನ್ನು ಆಗ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿ ಅವರು ಹೇಳಿದ್ದರು. ಹೀಗಿರುವಾಗ ಈ ಭಾಗದ ಜನರು, ರೈತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಎಲ್ಲಿದೆ ?

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಕಳೆದಿವೆ. ಜನತೆಯ ಆಶೀರ್ವಾದದಿಂದ ಅಧಿಕಾರಕ್ಕೆ ಬಂದ ಈ ಅವಧಿಯಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಈ ಮಾತನ್ನು ಅತ್ಯಂತ ಆತ್ಮ ವಿಶ್ವಾಸ ಹಾಗೂ ಹೆಮ್ಮೆಯಿಂದ ಹೇಳುತ್ತೇನೆ.

ಸಾಮಾನ್ಯವಾಗಿ ಸರ್ಕಾರಗಳು ಪ್ರಣಾಳಿಕೆಗಳನ್ನು ಕೇವಲ ಪ್ರಚಾರಕ್ಕೆ ಬಳಸುತ್ತವೆ. ಆದರೆ ನಮ್ಮ ಸರ್ಕಾರ ಆ ರೀತಿ ಮಾಡಲಿಲ್ಲ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 155 ಈಡೇರಿಸಿದ್ದೇವೆ. ಈ ಮೂಲಕ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ರೈತ ವರ್ಗದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ.

ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅರ್ಧಗಂಟೆಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ ಯೋಜನೆ ಜಾರಿಗೆ ಬಂತು. ಬಡವರ ಮನೆಗಳಿಗೆ ನೀಡುವ ಸಬ್ಸಿಡಿಯಲ್ಲಿ ಹೆಚ್ಚಳವಾಯಿತು. ಅವಸರದಲ್ಲಿ ಈ ಕಾರ್ಯಕ್ರಮಗಳನ್ನು ಜಾರಿಗೆ ತರುವ ಅಗತ್ಯವೇನು ಎಂದು ಪ್ರತಿಪಕ್ಷಗಳು ಪ್ರಶ್ನೆ ಮಾಡಿದವು. ಬಡವರಿಗೆ ಕಾರ್ಯಕ್ರಮಗಳನ್ನು ಕೊಡುವಾಗ ಅವಸರದಲ್ಲೇ ಮಾಡಬೇಕು. ವಿಳಂಬವಾಗಬಾರದು ಎಂದು ಅವರಿಗೆ ಉತ್ತರ ಕೊಟ್ಟೆ.

ಅಕ್ಕಿ ಕೊಡುವ ಮೂಲಕ ಬಡವರನ್ನು ಸರ್ಕಾರ ಸೋಮಾರಿಗಳನ್ನಾಗಿ ಮಾಡಿದೆ. ನಮ್ಮ ಹೊಲ, ತೋಟ, ಗದ್ದೆಗಳಲ್ಲಿ ಕೆಲಸ ಮಾಡಲು ಜನರೇ ಸಿಗುತ್ತಿಲ್ಲ ಎಂದು ಪ್ರತಿಪಕ್ಷದ ಶಾಸಕರೊಬ್ಬರು ವಿಧಾನಸಭೆಯಲ್ಲಿ ಹೇಳಿದರು.

ನಾವು ಬಸವಣ್ಣನವರ ತತ್ವದಲ್ಲಿ, ಕಾಯಕದಲ್ಲಿ ನಂಬಿಕೆ ಇಟ್ಟವರು. ಕೆಲಸ ಮಾಡುವ ಜನ ಹಸಿವಿನಿಂದ ಮಲಗಬಾರದು. ಪ್ರತಿಯೊಬ್ಬರೂ ಎರಡು ವೇಳೆ ಊಟ ಮಾಡಲೇಬೇಕು. ಬಡವರು, ಕೂಲಿ ಕಾರ್ಮಿಕರು ದುಡಿದು ದುಡಿದು ಸಾಕಾಗಿದ್ದಾರೆ. ದುಡಿದವರು ವಿಶ್ರಾಂತಿ ಪಡೆಯಲಿ. ದುಡಿಸಿಕೊಂಡವರು ಈಗಲಾದರೂ ದುಡಿಯಲಿ ಎಂದು ನಾನು ಅವರಿಗೆ ಹೇಳಿದೆ.

ರೈತರ ಸಾಲ ಮನ್ನಾ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿಯವರು ಹೇಳಿದರು. ನಾನು ಸಹಕಾರ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುತ್ತೇನೆ. ನೀವು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡಿಸಿ ಎಂದು ಆ ಪಕ್ಷದ ನಾಯಕರಿಗೆ ಹೇಳಿದೆ.

ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಿದಾಗ “ನಾನು ನೋಟುಗಳನ್ನು ಮುದ್ರಿಸುವ ಯಂತ್ರ ಇಟ್ಟುಕೊಂಡಿಲ್ಲ” ಎಂದು ಇದೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹೇಳಿದ್ದರು.

ಭಾರತೀಯ ಜನತಾ ಪಕ್ಷಕ್ಕೆ ಮತ್ತೊಂದು ಅನ್ವರ್ಥ ನಾಮ ಎಂದರೆ ಢೋಂಗೀ ಪಕ್ಷ. ಆ ಪಕ್ಷದ ನಾಯಕರು ಢೋಂಗೀ ನಾಯಕರು.

ಸಹಕಾರ ಬ್ಯಾಂಕ್‍ಗಳ ಮೂಲಕ ರೈತರು ಪಡೆದಿರುವ ಸಾಲವನ್ನು 50 ಸಾವಿರ ರೂ.ಗಳ ವರೆಗೆ ಸರ್ಕಾರ ಮನ್ನಾ ಮಾಡಿದೆ. ಇದರಿಂದ ಸುಮಾರು 22.22 ಲಕ್ಷ ರೈತರ 8165 ಕೋಟಿ ಸಾಲ ಮನ್ನಾ ಆಗಿದೆ. ಈ ಕೆಲಸವನ್ನು ಹಿಂದಿನ ಯಾವ ಸರ್ಕಾರವೂ ಮಾಡಿರಲಿಲ್ಲ.
ಯಡಿಯೂರಪ್ಪ ಅವರೇ ಈಗಲೂ ಕಾಲ ಮಿಂಚಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳ ಮುಲಕ ರೈತರು ಪಡೆದಿರುವ ಸಾಲ ಮನ್ನಾ ಮಾಡುವಂತೆ ಪ್ರಧಾನಿಯವರ ಮೇಲೆ ಒತ್ತಡ ಹೇರಲು ಲೋಕಸಭೆಗೆ ಮುತ್ತಿಗೆ ಹಾಕಿ.

ಸಾಲ ಮನ್ನಾ ವಿಚಾರದಲ್ಲಿ ಪ್ರಧಾನಿಯವರನ್ನು ಭೇಟಿಯಾದಾಗ ಯಡಿಯೂರಪ್ಪ, ಅನಂತಕುಮಾರ್ ಸ್ಥಳದಲ್ಲೇ ಇದ್ದರೂ ಬಾಯಿ ಬಿಡಲಿಲ್ಲ. ನಾವು ಸಾಲ ಮನ್ನಾ ಮಾಡಿದ ಬಳಿಕ ಈಗ ಅವರು ಚಕಾರ ಎತ್ತುತ್ತಿಲ್ಲ.

ಯಡಿಯೂರಪ್ಪ ಅವರೇ, ನೀವು ಹಸಿರು ಟವೆಲ್ ಹಾಕಿಕೊಂಡು, ನಾನು ರೈತನ ಮಗ ಎಂದು ಹೇಳಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಿರಿ. ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದವರು ನೀವು. ಆದರೆ, ಮೂರೇ ತಿಂಗಳಲ್ಲಿ ಹಾವೇರಿಯಲ್ಲಿ ಗೊಬ್ಬರ, ಬೀಜ ಕೇಳಿದ ರೈತರನ್ನು ಕೊಂದು ಹಾಕಿದಿರಿ. ರೈತರು, ಬಡವರ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕ ಹಕ್ಕಿಲ್ಲ.

ಬಿಜೆಪಿಯವರು ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳು. ದಲಿತರ ಬಗ್ಗೆ ಮಾತನಾಡುವ ನ್ಶೆತಿಕತೆಯನ್ನೂ ಅವರು ಉಳಿಸಿಕೊಂಡಿಲ್ಲ.
ರಾಜ್ಯದಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅದಕ್ಕೆ ರಾಜ್ಯಕ್ಕೆ ಅಮಿತ್ ಶಾ ಬರಲಿ ಎಂದು ಬೊಬ್ಬೆ ಹಾಕುತ್ತಿದ್ದಾರೆ.

ಬಿಜೆಪಿ ನಡಿಗೆ ದಲಿತರ ಮನೆಯ ಕಡೆಗೆ ಎಂದು ಆ ಪಕ್ಷದ ನಾಯಕರು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಲಿತರ ಮನೆಗಳಿಗೆ ಹೋಗಿ ಹೋಟೆಲ್‍ನಿಂದ ತಂದ ಇಡ್ಲಿ, ವಡೆ, ದೋಸೆ ಸಾಂಬಾರ್ ತಿಂದರು. ಕೊನೆಗೆ ನಾವು ದಲಿತರ ಪರ ಎಂದು ಹೇಳಿ ಫೋಸು ಕೊಟ್ಟರು.

ನಾವು ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟರ ಕಲ್ಯಾಣಕ್ಕೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸುತ್ತಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ಐದು ವರ್ಷದಲ್ಲಿ ಖರ್ಚು ಮಾಡಿದ ಹಣ 21 ಸಾವಿರ ಕೋಟಿ.

ನಾವು ಐದು ವರ್ಷದಲ್ಲಿ ಖರ್ಚು ಮಾಡುತ್ತಿರುವ ಅನುದಾನ 86 ಸಾವಿರ ಕೋಟಿ ರೂಪಾಯಿ. ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದರೆ ಸಾಲದು. ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಕಾಮಗಾರಿಯಲ್ಲೂ ಮೀಸಲು ಸೌಲಭ್ಯ ಜಾರಿಗೆ ತರಲಾಗಿದೆ. ಇದಕ್ಕಾಗಿ ಕಾನೂನು ಜಾರಿಗೆ ತಂದ ದೇಶದಲ್ಲೇ ಏಕೈಕ ಸರ್ಕಾರ ನಮ್ಮದು ಎಂಬ ಮಾತನ್ನು ಅತ್ಯಂತ ಹೆಮ್ಮೆಯಿಂದ ಹೇಳುತ್ತೇನೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. 2019ರ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿಯವರು ಪ್ರಧಾನಿಯಾಗುತ್ತಾರೆ.

ಹೈದರಾಬಾದ್-ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸುವ ಮೂಲಕ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ನಾವು ಅತ್ಯಂತ ಕಳಕಳಿಯಿಂದ ಮನವಿ ಮಾಡುತ್ತೇನೆ.

ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳಿಕೊಂಡು ಬಿಜೆಪಿಯವರು ದೇಶದ ತುಂಬಾ ಓಡಾಡುತ್ತಿದ್ದಾರೆ. ಅದು ಸಾಧ್ಯವಾಗದ ಮಾತು. ಈಗ ಬಿಜೆಪಿಯವರು ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ನಾಯಕರು, ಆರ್‍ಎಸ್‍ಎಸ್ ನೇತಾರರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ. ಈ ದೇಶಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ್ದರೆ ಅದು ಕಾಂಗ್ರೆಸ್ ಮಾತ್ರ.

ಬಿಜೆಪಿಯವರು ಜನರನ್ನು ದಾರಿ ತಪ್ಪಿಸುವ, ಮರಳು ಮಾಡುವ ಹಾಗೂ ಸುಳ್ಳು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ 60 ವರ್ಷದಲ್ಲಿ ಏನೂ ಮಾಡಿಲ್ಲ ಎನ್ನುತ್ತಿದ್ದಾರೆ.

ಈ ದೇಶದಲ್ಲಿ ನೀರಾವರಿ ಯೋಜನೆಗಳಾಗಿದ್ದರೆ, ಕೈಗಾರಿಕೆಗಳು ಸ್ಥಾಪನೆಯಾಗಿದ್ದರೆ, ಶಿಕ್ಷಣದ ಪ್ರಮಾಣ ಶೇ. 76ಕ್ಕೆ ಹೋಗಿದ್ದರೆ, ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿ ಅಲ್ಲ.

– ವಾರ್ತಾ ಭಾರತಿ

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group